ಬೆಂಗಳೂರು: ಸರ್ಜಾಪುರದ ಎಸ್‌ಬಿಐ ಬ್ಯಾಂಕ್‌ಗೆ ಹೋಗಿದ್ದ ಗ್ರಾಹಕರೊಬ್ಬರ ಜೊತೆ ಬ್ಯಾಂಕ್ ಮ್ಯಾನೇಜರ್ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಈ ಪ್ರಕರಣದ ಬಗ್ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬಗ್ಗೆ ಟ್ವಿಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ಅನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿರುವ ಎಸ್‌ಬಿಐ ಶಾಖೆ ವ್ಯವಸ್ಥಾಪಕರ ವರ್ತನೆಯು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಲು ನಿರಾಕರಿಸಿ ನಾಗರಿಕರ ಬಗ್ಗೆ ನಿರ್ಲಕ್ಷ್ಯ ತೋರಿರುವುದು ತೀವ್ರವಾಗಿ ಖಂಡನೀಯ. ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಎಸ್‌ಬಿಐನ ತ್ವರಿತ ಕ್ರಮವನ್ನು ನಾವು ಪ್ರಶಂಸಿಸುತ್ತೇವೆ. ಈ ವಿಷಯವನ್ನು ಈಗ ಮುಕ್ತಾಯಗೊಳಿಸಲಾಗಿದೆ ಎಂದು ಪರಿಗಣಿಸಬಹುದು. ಈ ರೀತಿಯ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ನೌಕರರು ಗ್ರಾಹಕರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಸಿಎಂ ಟ್ವಿಟ್ ಮಾಡಿದ್ದಾರೆ..
ಏನಿದು ಘಟನೆ?
ಇನ್ನು ಸರ್ಜಾಪುರದ ಎಸ್‌ಬಿಐ ಬ್ಯಾಂಕ್‌ಗೆ ಕೆಲಸದ ನಿಮಿತ್ತ ಗ್ರಾಹಕ ಹೋದಾಗ ಕನ್ನಡ ಮಾತನಾಡುವಂತೆ ಕೇಳಿದ್ದಾರೆ. ಆದರೆ ಕನ್ನಡ ಮಾತನಾಡಲು ಒಪ್ಪದ ಮಹಿಳಾ ಮ್ಯಾನೇಜರ್ ಗ್ರಾಹಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ಅವಾಜ್ ಹಾಕಿದ್ದು, ಇದು ಭಾರತ ಬರೀ ಕರ್ನಾಟಕ ಮಾತ್ರ ಅಲ್ಲ. ನಾನು ಯಾವತ್ತೂ ಕನ್ನಡವನ್ನೇ ಮಾತಾಡಲ್ಲ ಅಂತ ಹೇಳುವ ಮೂಲಕ ಕರ್ನಾಟಕದಲ್ಲಿ ಮತ್ತೆ ಕನ್ನಡಿಗರನ್ನ ಕೆರಳಿಸುವಂತ ಹೇಳಿಕೆ ಕೊಟ್ಟು, ಕೆಂಗಣ್ಣಿಗೆ ಗುರಿಯಾಗಿದ್ದರು, ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.