ಹುಬ್ಬಳ್ಳಿ: ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲಿನ ಪೈಶಾಚಿಕ ಕೃತ್ಯಗಳು ನಿಲ್ಲುತ್ತಿಲ್ಲ. ಹುಬ್ಬಳ್ಳಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಭೀಕರ ಘಟನೆ ನಡೆದಿದೆ. ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ನಂತರ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಬಾಲಕಿ ಮೃತದೇಹವನ್ನು ಪೊಲೀಸರು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಇನ್ನು ಬಾಲಕಿಯ ಕೊಲೆ ಖಂಡಿಸಿ ಸ್ಥಳೀಯರು ಆರೋಪಿಯನ್ನು ಎನ್ ಕೌಂಟರ್ ಮಾಡುವಂತೆ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯ ಅಶೋಕನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಿಹಾರ ಮೂಲದ ಯುವಕ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಚಾಕಲೇಟ್ ಕೊಡುವುದಾಗಿ ಆಸೆ ತೋರಿಸಿ ತನ್ನ ಹತ್ತಿರಕ್ಕೆ ಕರೆದಿದ್ದಾರೆ. ಬಳಿಕ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ನಂತರ ಎಲ್ಲಿ ಮಗು ತನ್ನನ್ನು ಗುರುತಿಸುತ್ತದೆಯೋ ಎಂಬ ಭಯದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿಯ ಚಲನವಲನಗಳು ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ಘಟನೆ ಸಂಬಂಧ ಮೃತ ಬಾಲಕಿಯ ಪೋಷಕರು ಹಾಗೂ ಸ್ಥಳೀಯರು ಅಶೋಕನಗರ ಪೊಲೀಸ್ ಠಾಣೆ ಬಳಿ ಧಾವಿಸಿ ಪ್ರತಿಭಟನೆ ನಡೆಸಿದ್ದು ಆರೋಪಿಯನ್ನು ಎನ್ ಕೌಂಟರ್ ಮಾಡುವಂತೆ ಆಗ್ರಹಿಸಿದ್ದಾರೆ.