ನವದೆಹಲಿ: ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿದೆ. ಭಾರತ ಧ್ವಂಸ ಮಾಡಿರುವ ಈ ಉಗ್ರರ ನೆಲೆಗಳು ಮೋಸ್ಟ್ ಡೇಂಜರಸ್ ತಾಣಗಳು ಎಂದೇ ಗುರುತಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಕಂಟಕವಾಗಿದ್ದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಲ್ಲಿ ಅಡಗಿಸಿಡಲಾಗಿತ್ತು. ಜೊತೆಗೆ ವಿಶ್ವಾದ್ಯಂತ ವಿವಿಧೆಡೆಗೆ ಕಳುಹಿಸಲು ಇಲ್ಲಿ ತರಬೇತಿ ನೀಡಲಾಗುತ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಅದಕ್ಕಾಗಿ ಭಾರತೀಯ ಸೇನೆಯು ನಾಗರಿಕರು ಮತ್ತು ಸೇನೆಯನ್ನ ಗುರಿಯಾಗಿಸದೇ ಕೇವಲ ಉಗ್ರರ ನೆಲೆಗಳನ್ನ ಗುರಿಯಾಗಿಸಿ ದಾಳಿ ನಡೆಸಿದೆ.
ದಾಳಿ ಎಲ್ಲೆಲ್ಲಿ ನಡೆದಿದೆ?
1) ಬಹವಾಲ್ಪುರ್: ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್ ಮೇಲೆ ದಾಳಿ ನಡೆದಿದೆ. ಇದು ಜೈಷ್ ಉಗ್ರ ಸಂಘಟನೆಯ ಪ್ರಧಾನ ಕಚೇರಿಯಾಗಿತ್ತು.
2) ಮುರಿಡ್ಕೆ: ಸಾಂಬಾ ಎದುರಿನ ಗಡಿಯಿಂದ 30 ಕಿ.ಮೀ ದೂರದಲ್ಲಿದ್ದು ಇದು ಲಷ್ಕರ್-ಎ-ತೈಬಾ ಸಂಘಟನೆ ಉಗ್ರರ ಶಿಬಿರ ನಡೆಸುತ್ತಿತ್ತು. ಮುಂಬೈ ದಾಳಿ ನಡೆಸಿದ ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು.
3) ಗುಲ್ಪುರ್ : ಗಡಿ ನಿಯಂತ್ರಣ ರೇಖೆ ಪೂಂಚ್-ರಾಜೌರಿಯಿಂದ 35 ಕಿ.ಮೀ ದೂರದಲ್ಲಿದೆ. ಪೂಂಚ್‌ನಲ್ಲಿ ಏಪ್ರಿಲ್ 20, 2023 ರಂದು ನಡೆದ ದಾಳಿ ಮತ್ತು ಜೂನ್ 24 ರಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಮಾಯಕ ಯಾತ್ರಿಕರ ಮೇಲೆ ಇಲ್ಲಿ ತರಬೇತಿ ಪಡೆದ ಉಗ್ರರು ದಾಳಿ ನಡೆಸಿದ್ದರು.
4) ಸವಾಯಿ: ಲಷ್ಕರ್ ಉಗ್ರರ ಕ್ಯಾಂಪ್ ಇದಾಗಿದ್ದು ಗಡಿ ನಿಯಂತ್ರಣ ರೇಖೆಯಿಂದ 30 ಕಿ.ಮೀ ದೂರದಲ್ಲಿದೆ. ಕಳೆದ ವರ್ಷ ಅಕ್ಟೋಬರ್ 20, 24 ರಂದು ಸೋನ್‌ಮಾರ್ಗ್, ಅಕ್ಟೋಬರ್ 24 ರಂದು ಗುಲ್ಮಾರ್ಗ್ ಮತ್ತು ಏಪ್ರಿಲ್ 22 ರಂದು ಪಹಲ್ಗಾಮ್ ಮೇಲೆ ದಾಳಿ ನಡೆಸಿದ ಉಗ್ರರು ಇಲ್ಲಿ ತರಬೇತಿ ಪಡೆದಿದ್ದರು.
5) ಬಿಲಾಲ್: ಉಗ್ರ ಸಂಘಟನೆ ಜೈಷ್–ಎ–ಮೊಹಮದ್ ಲಾಂಚ್ ಪ್ಯಾಡ್ ಇದಾಗಿದ್ದು ಉಗ್ರರು ಇಲ್ಲಿ ಕೊನೆಯ ಹಂತದ ತರಬೇತಿ ಪಡೆದು ಭಾರತಕ್ಕೆ ನುಗ್ಗುತ್ತಿದ್ದರು.
6) ಕೋಟ್ಲಿ: ಗಡಿ ನಿಯಂತ್ರಣ ರೇಖೆಯಿಂದ 15 ಕಿ.ಮೀ ದೂರದಲ್ಲಿದೆ. ಲಷ್ಕರ್ ಉಗ್ರರ ಕ್ಯಾಂಪ್ ಇದಾಗಿದ್ದು 50 ಉಗ್ರರಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿತ್ತು.
7) ಬರ್ನಾಲಾ: ಭಾರತ ಗಡಿಯಿಂದ 10 ಕಿ.ಮೀ ದೂರದಲ್ಲಿದೆ. ಇಲ್ಲೂ ಲಷ್ಕರ್ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು.
8) ಸರ್ಜಲ್: ಸಾಂಬಾ ಕಟುವಾ ಬಳಿ ಅಂತಾರಾಷ್ಟ್ರೀಯ ಗಡಿಯಿಂದ 8 ಕಿಲೋಮೀಟರ್ ದೂರದಲ್ಲಿ ಜೈಶ್ ಎ ಮೊಹಮದ್ ಕ್ಯಾಂಪ್.
9) ಮಹಮೂನಾ: ಸಿಯಾಲ್ ಕೋಟ್ ಬಳಿಯ ಅಂತಾರಾಷ್ಟ್ರೀಯ ಗಡಿಯಿಂದ 15 ಕಿಲೋಮೀಟರ್ ದೂರದಲ್ಲಿ ಹಿಜ್ಬುಲ್ಲಾ ಟ್ರೈನಿಂಗ್ ಸೆಂಟರ್.