News / Blog Details

  • Home
  • >
  • News / Blog Details

ಜನಿವಾರ ಪ್ರಕರಣ; ಸುಚಿವ್ರತ್ ಕುಲಕರ್ಣಿಗೆ 2 ಆಯ್ಕೆ ನೀಡಿದ ಸರ್ಕಾರ

  • 8
img ಜನಿವಾರ ಪ್ರಕರಣ; ಸುಚಿವ್ರತ್ ಕುಲಕರ್ಣಿಗೆ 2 ಆಯ್ಕೆ ನೀಡಿದ ಸರ್ಕಾರ
Font size:
Print

ಬೆಂಗಳೂರು: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ಅವಕಾಶ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷೆಯಿಂದ ವಂಚಿತರಾದ ಬೀದರ್​ನ ವಿದ್ಯಾರ್ಥಿ ಸುಚಿವ್ರತ್​ ಕುಲಕರ್ಣಿ ಅವರಿಗೆ ಸರ್ಕಾರ ಎರಡು ಆಯ್ಕೆಗಳನ್ನು ನೀಡಿದೆ. ಭೌತವಿಜ್ಞಾನ ಹಾಗೂ ರಾಸಯನ ವಿಜ್ಞಾನ ವಿಷಯಗಳಲ್ಲಿ ಪಡೆದ ಸರಾಸರಿ ಅಂಕಗಳನ್ನು ಗಣಿತ ವಿಷಯಕ್ಕೆ ನೀಡುವುದು. ಬೇಡವೆಂದರೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ಸರ್ಕಾರ ವಿದ್ಯಾರ್ಥಿ ಮುಂದಿಟ್ಟಿದೆ. ಈ ಮಾಹಿತಿಯನ್ನು ಸ್ವತಃ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್​ ಅವರು ವಿದ್ಯಾರ್ಥಿ ಸುಚಿವ್ರತ್​ ಕುಲಕರ್ಣಿ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ವಿದ್ಯಾರ್ಥಿ ಸುಚಿವ್ರತ್​ ಕುಲಕರ್ಣಿ ಆಯ್ಕೆಯ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಪ್ಪಿಗೆ ನೀಡಲಿದೆ ಎಂದು ಸಚಿವರು ಹೇಳಿದ್ದಾರೆ. ಇನ್ನು ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿ ಸುಚಿವ್ರತ್​ ಕುಲಕರ್ಣಿ ಅವರಿಗೆ ಉಚಿತವಾಗಿ ಇಂಜಿನಿಯರಿಂಗ್ ಸೀಟ್ ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದರು. ಘಟನೆ ನಡೆದ ಬಳಿಕ ಸುಚಿವ್ರತ್ ಕುಲಕರ್ಣಿ ಮನೆಗೆ ಭೇಟಿ ನೀಡಿದ್ದ ಸಚಿವ ಈಶ್ವರ್​ ಖಂಡ್ರೆ ವಿದ್ಯಾರ್ಥಿ ಹಾಗೂ ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿ, ಉಚಿತವಾಗಿ ಇಂಜಿನಿಯರಿಂಗ್ ಸೀಟ್ ಕೊಡಿಸುವುದಾಗಿ ಹೇಳಿದ್ದರು. ಸುಚಿವ್ರತ್‌ ಕುಲಕರ್ಣಿ ಬೀದರ್​ನ ಮನ್ನಳ್ಳಿ ರಸ್ತೆಯಲ್ಲಿರುವ ಸಾಯಿಸ್ಫೂರ್ತಿ ಕಾಲೇಜಿಗೆ ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದರು. ಈ ವೇಳೆ, ಅಲ್ಲಿನ ಸಿಬಂದಿ ಜನಿವಾರ ತೆಗೆದು ಪರೀಕ್ಷೆ ಹಾಜರಾಗುವಂತೆ ಸೂಚಿಸಿದ್ದರು. ಇದಕ್ಕೆ ಒಪ್ಪದ ಸುಚಿವೃತ ಕುಲಕರ್ಣಿಯವರು ಜನಿವಾರ ತೆಗೆಯದೆ ವಾಪಸ್​ ಮನೆಗೆ ಹೋಗಿದ್ದರು. ಅಧಿಕಾರಿಗಳ ಈ ಕ್ರಮದ ವಿರುದ್ಧ ಬ್ರಾಹ್ಮಣ ಮಹಾಸಭಾ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಹಾಗೇ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ರಾಜಕೀಯ ನಾಯಕರು ಕೂಡ ಈ ಘಟನೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
 

No Reviews