ಬೆಂಗಳೂರು: ಪ್ರಸ್ತುತ ಜಾತಿ ಜನಗಣತಿ ವರದಿಯೇ ಸಿದ್ದರಾಮಯ್ಯಗೆ ಮರಣ ಶಾಸನ ಆಹಬಹುದು. ಏಕೆಂದರೆ ಅವರ ಪಕ್ಷದವರೇ ರಾಜಕೀಯವಾಗಿ ಕಾಲೆಳೆಯಲು ಪಿತೂರಿ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ನುಡಿದಿದ್ದಾರೆ. ಜಾತಿ ಜನಗಣತಿ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ಕಾಗಕ್ಕ ಗೂಬಕ್ಕ ಕತೆ ಥರ ಇದೆ. ಈ ವರದಿ ಸಿದ್ದರಾಮಯ್ಯಗೇ ಮರಣ ಶಾಸನ ಆಗಬಹುದು. ಅವರ ಪಕ್ಷದವರೇ ಅವರನ್ನು ರಾಜಕೀಯವಾಗಿ ಕಾಲೆಳೆಯಲು ಪಿತೂರಿ ಮಾಡ್ತಿದ್ದಾರೆ. ಈ ವರದಿ ಜಾರಿಯಾದರೆ ಸಿದ್ದರಾಮಯ್ಯ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಖಳನಾಯಕ ಆಗ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಪೂರ್ಣ ಸತ್ಯ ಗೊತ್ತಿದೆ. ಆದ್ರೆ ಅವರು ಅವರ ಕುರ್ಚಿ ಉಳಿಸಿಕೊಳ್ಳಲು ವರದಿ ಜಾರಿಗೆ ಮುಂದಾಗಿದ್ದಾರೆ. ಮೊನ್ನೆ ಮೊನ್ನೆ ಅವರ ಹೈಕಮಾಂಡ್ ನಾಯಕರು ಅವರನ್ನು ಕರೆದು ಹೇಳಿದ್ದಾರೆ, ಸಿದ್ದರಾಮಯ್ಯ ಅವರ ಇವತ್ತಿನ ಪರಿಸ್ಥಿತಿ ನೋಡಿದ್ರೆ, ಈ ಮಟ್ಟಕ್ಕೂ ಅವರು ಬಂದಿದ್ದಾರಾ ಅನ್ನೋ ನೋವು ಕಾಡುತ್ತೆ ನನಗೆ ಎಂದು ಹೇಳಿದ್ದಾರೆ. ಪ್ರಸ್ತುತ ತಂದಿರುವ ಜಾತಿ ಜನಗಣತಿ ವರದಿಯನ್ನು ಸಿದ್ದರಾಮಯ್ಯ ಅವರು ತಿರಸ್ಕರಿಸಬೇಕು. ಮತ್ತೊಂದು ಸಮೀಕ್ಷೆಯನ್ನು ಮಾಡಿ, ಇನ್ನೂ ಮೂರು ವರ್ಷ ಸಮಯ ಇದೆ ಸಿದ್ದರಾಮಯ್ಯಗೆ. ಈ ಸಮೀಕ್ಷೆ ವೈಜ್ಞಾನಿಕವಾಗಿ ಮಾಡಿಲ್ಲ, ವರದಿ ಪಾರದರ್ಶಕ ಆಗಿಲ್ಲ. ಇದೊಂದು ಜೇನುಗೂಡಿಗೆ ಕೈ ಹಾಕಿದಂತೆ, ನಿಮ್ಮ ಪಕ್ಷದವರೇ ಏನೇನೋ ಹಿಡಿದು ತಿವೀತಿದ್ದಾರೆ. ಈ ವರದಿ ಜಾರಿ ಆದ್ರೆ ಸಾಮಾನ್ಯ ಜನರೂ ಸಿದ್ದರಾಮಯ್ಯಗೆ ಶಾಪ ಹಾಕ್ತಾರೆ. ವರದಿ ಜಾರಿಯಾದರೆ ಸಿದ್ದರಾಮಯ್ಯ ಒಂಟಿಯಾಗಿ ಹೋಗ್ತಾರೆ. ಆದ್ದರಿಂದ ಈ ವರದಿ ತಿರಸ್ಕರಿಸುವಂತೆ ವಿ. ಸೋಮಣ್ಣ ಮನವಿ ಮಾಡಿದ್ದಾರೆ.
ಸಿಎಂ ಕುರ್ಚಿ ಉಳಿಸಿಕೊಳ್ಳಲು ವರದಿ ಜಾರಿಗೆ ಮುಂದಾಗಿದ್ದಾರೆ- ಸಚಿವ ಸೋಮಣ್ಣ
2025-04-13 13:29:34- 12