ಬೆಂಗಳೂರು: ಭಾನುವಾರ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ ಸುರಿದಿದ್ದು, ಬೆಂಗಳೂರು ನಗರದಾದ್ಯಂತ ದಾಖಲೆಯ ಮಳೆಯಾಗಿದೆ. ರಾತ್ರಿಯಿಂದ ಬೆಳಗ್ಗೆ 5:30ರವರೆಗೆ ನಗರ ವ್ಯಾಪ್ತಿಯಲ್ಲಿ 104 ಮಿ.ಮೀ ಮಳೆಯಾಗಿದೆ. ಕಳೆದ 10 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತಿಹೆಚ್ಚು ಮಳೆ ಇದಾಗಿದೆ. ಭಾರೀ ಮಳೆಗೆ ರಸ್ತೆಗಳಲ್ಲಿ ನೀರು ನಿಂತಿದೆ. ಅಲ್ಲದೇ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರಿನ ಹಲವೆಡೆ ಮುಂದಿನ 12 ಗಂಟೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕೆಲವು ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕೆಆರ್ ಸರ್ಕಲ್, ಕಾರ್ಪೊರೇಷನ್, ಮೆಜೆಸ್ಟಿಕ್ , ಕೆ.ಆರ್. ಮಾರುಕಟ್ಟೆ, ಜಯನಗರ, ವಿಜಯನಗರದಲ್ಲಿ ರಾತ್ರಿಇಡೀ ಭಾರೀ ಮಳೆಯಾಗಿದೆ. ಅಲ್ಲದೇ ಚಂದ್ರಲೇಔಟ್, ರಾಜಾಜಿನಗರ, ಆರ್.ಟಿ ನಗರ, ಹೆಬ್ಬಾಳ, ಕೋರಮಂಗಲ, ಕಾಮಾಕ್ಷಿ ಪಾಳ್ಯದಲ್ಲಿ ವರುಣ ಆರ್ಭಟಿಸಿದ್ದು, ಬೊಮ್ಮನಹಳ್ಳಿ, ನಾಯಂಡಹಳ್ಳಿ, ಆರ್.ಆರ್ ನಗರದಲ್ಲಿ ಜೋರು ಮಳೆಯಾಗಿದೆ.
ಬೆಂಗಳೂರಲ್ಲಿ ರಾತ್ರಿ ವರುಣನ ಆರ್ಭಟ, ಜನಜೀವನ ಅಸ್ತವ್ಯಸ್ತ
2025-05-19 11:37:57- 61