ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ನ ಉಗ್ರರ ದಾಳಿಯ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಸಕಲ ವ್ಯವಸ್ಥೆ ಮಾಡಿದೆ ಹಾಗೂ ಉಗ್ರರ ದಾಳಿಯ ಮಾಹಿತಿ ಕೊರತೆ ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಕರ್ನಾಟಕದ ಪ್ರವಾಸಿಗರಲ್ಲಿ ಮಂಜುನಾಥ್ ಹಾಗೂ ಭರತ್ ಭೂಷಣ್ ಎಂಬವರು ಮೃತರಾಗಿರುವ ಬಗ್ಗೆ ಮಾಹಿತಿ ನೀಡಿದರು. ಕನ್ನಡಿಗರ ರಕ್ಷಣೆ ಹಾಗೂ ಇನ್ನಿತರ ವ್ಯವಸ್ಥೆಗಳಿಗಾಗಿ ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ರವಾನಿಸಲಾಗಿದೆ. ಕಾಶ್ಮೀರಕ್ಕೆ ತೆರಳಿರುವ 40ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕರೆತರಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನೂ ಕಾಶ್ಮೀರಕ್ಕೆ ಕಳುಹಿಸಲಾಗಿದೆ ಎಂದರು. ಇನ್ನು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿರುವ ಉಗ್ರರ ದಾಳಿ ಪೂರ್ವಯೋಜಿತ ಸಂಚು. ಪ್ರಾಣಹತ್ಯೆ ಮಾಡಿರುವ ಈ ಘಟನೆ ಅತ್ಯಂತ ಖಂಡನೀಯ. ಘಟನೆಯಲ್ಲಿ ಸುಮಾರು 28 ಜನ ಮೃತಪಟ್ಟಿರುವ ಭೀಕರವಾದ ಉಗ್ರರ ದಾಳಿ ನಡೆಯುವ ಮಾಹಿತಿ ಮೊದಲೇ ತಿಳಿಯದಿರುವುದು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ. ಈ ಹಿಂದೆ ನಡೆದ ಪುಲ್ವಾಮಾ ಘಟನೆಯಲ್ಲಿಯೂ ಗುಪ್ತಚರ ಮಾಹಿತಿಯ ವೈಫಲ್ಯವಿದೆ ಎಂದರು. ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ, ಸಕಾರಾತ್ಮಕವಾಗಿ ಚಿಂತಿಸಿ ಪರಿಶೀಲಿಸಲಿದೆ. ಪೆಹಲ್ಗಾಮಿನ ಉಗ್ರರ ದಾಳಿ ಪ್ರಕರಣದಲ್ಲಿ ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ. ಭಯೋತ್ಪಾದಕರನ್ನು ನಿರ್ಮೂಲನೆಗೊಳಿಸುವ ಜೊತೆಗೆ ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಕೇಂದ್ರ ಸಮರ್ಥವಾಗಿ ನಿರ್ವಹಿಸಬೇಕು ಎಂದು ಹೇಳಿದ್ದರು.
ಉಗ್ರರ ದಾಳಿ ಪೂರ್ವಯೋಜಿತ ಸಂಚು- ಸಿದ್ದರಾಮಯ್ಯ
2025-04-23 15:56:20- 6