ಜೈಪುರ: ರಾಜಸ್ತಾನ ರಾಯಲ್ಸ್ ತಂಡದ ಯುವ ಸೆನ್ಸೆಶನ್ ವೈಭವ್ ಸೂರ್ಯವಂಶಿ ಇದೀಗ ಮನೆಮಾತಾಗಿದ್ದಾರೆ. ಸೋಮವಾರ (ಏ.29) ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 14 ವರ್ಷದ ವೈಭವ್ ಸೂರ್ಯವಂಶಿ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಕೇವಲ 35 ಎಸೆತದಲ್ಲಿ ಶತಕ ಪೂರೈಸಿ ಐಪಿಎಲ್ ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ತಾನ ರಾಯಲ್ಸ್ ತಂಡವು ವೈಭವ್ ಅವರನ್ನು ಖರೀದಿಸಿದಾಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ರಾಜಸ್ತಾನ ತಂಡವು 1.10 ಕೋಟಿ ರೂ ನೀಡಿ ರಾಯಲ್ಸ್ ಖರೀದಿ ಮಾಡಿತ್ತು. ಆ ಸಮಯದಿಂದಲೂ ವೈಭವ್ ಅವರ ವಯಸ್ಸಿನ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದರು. ಕ್ರಿಕೆಟ್ ನಲ್ಲಿ ಈ ಹಿಂದೆಯೂ ಹಲವು ಬಾರಿ ವಯಸ್ಸಿನ ವಂಚನೆ ಮಾಡಿರುವ ವಿವಾದ ನಡೆದಿರುವಾಗ, ವೈಭವ್ ಕೂಡಾ ಏಜ್ ಫ್ರಾಡ್ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜುನೈದ್ ಖಾನ್ ವೈಭವ್ ಮೇಲೆ ವಯಸ್ಸಿನ ವಂಚನೆ ಆರೋಪ ಹೊರಿಸಿದರು. ಕಳೆದ ವರ್ಷದ ಅಂಡರ್ 19 ಏಷ್ಯಾ ಕಪ್ನಲ್ಲಿ ವೈಭವ್ ಪ್ರದರ್ಶನವನ್ನು ನೋಡಿದ ನಂತರ 13 ವರ್ಷದ ಬಾಲಕನಿಗೆ ಅಂತಹ ಶಕ್ತಿ ಇರಬಹುದೇ ಎಂದು ಅವರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ವೈಭವ್ ತಂದೆ ಸಂಜೀವ್ ಸೂರ್ಯವಂಶಿ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ವೈಭವ್ ಸೂರ್ಯವಂಶಿ ಎಂಟು ವರ್ಷ ಇದ್ದಾಗಲೇ ಅವರಿಗೆ ಬಿಸಿಸಿಐ ಅಂಗೀಕರಿಸಿದ ಮೂಳೆ ಪರೀಕ್ಷೆ ಮಾಡಲಾಗಿತ್ತು ಎಂದು ಸಂಜೀವ್ ಹೇಳಿದ್ದಾರೆ. ಯುವ ಕ್ರಿಕೆಟಿಗರ ವಯಸ್ಸನ್ನು ಪರಿಶೀಲಿಸಲು ಮೂಳೆ ಪರೀಕ್ಷೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ವೈಭವ್ ಅವರು 13 ವರ್ಷವಿದ್ದಾಗಲೇ ಭಾರತ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದರು. ಆಗಲೂ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಅಂತಾರಾಷ್ಟ್ರೀಯ ಸರಣಿಗಳಲ್ಲಿ ಅಷ್ಟು ಸಣ್ಣ ಹುಡುಗ ಹೇಗೆ ಆಡಬಲ್ಲ ಎಂದು ಹಲವರು ಟೀಕೆ ಮಾಡಿದ್ದರು. ವಯಸ್ಸಿನ ವಿವಾದದ ನಡುವೆಯೇ, ವೈಭವ್ ತಂದೆ ಸಂಜೀವ್, ತಮ್ಮ ಮಗನ ಕ್ರಿಕೆಟ್ ಕನಸನ್ನು ನನಸಾಗಿಸಲು ತಮ್ಮ ಕೃಷಿ ಭೂಮಿಯನ್ನು ಮಾರಿದ್ದರು ಎಂಬ ವಿಷಯ ಬಹಿರಂಗವಾಗಿದೆ. ಬಿಹಾರದ 14 ವರ್ಷದ ಹುಡುಗ ವೈಭವ್ ಸದ್ಯ ಐಪಿಎಲ್ ಮೂಲಕ ಸದ್ದು ಮಾಡುತ್ತಿದ್ದಾರೆ.