ಬೆಂಗಳೂರು: ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕಾಂಪೌಂಡ್ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ ಘಟನೆ ಮಹದೇವಪುರದ ಚನ್ನಸಂದ್ರದಲ್ಲಿ ನಡೆದಿದೆ. ಶಶಿಕಲಾ (35) ಮಳೆಗೆ ಬಲಿಯಾದ ಮಹಿಳೆ. ರಾಜ್ಯ ರಾಜಧಾನಿಯಲ್ಲಿ ತಡರಾತ್ರಿ ಸುರಿದ ಭಾರೀ ಮಳೆ ಸಾಕಷ್ಟು ಅವಾಂತರವನ್ನೇ ಸೃಷ್ಟಿ ಮಾಡಿದೆ. ಇಂದು ಬೆಳಗ್ಗೆ ವೈಟ್ ಫೀಲ್ಡ್‌ನ ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋದಾಗ ದುರ್ಘಟನೆ ನಡೆದಿದೆ. ಕೆಲಸದ ಸ್ಥಳದಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದು ಶಶಿಕಲಾ ಸಾವನ್ನಪ್ಪಿದ್ದಾರೆ. ಇಡೀ ರಾತ್ರಿ ಮಳೆಗೆ ಗೋಡೆ ನೆನೆದಿದ್ದರಿಂದ ಕುಸಿದು ಶಶಿಕಲಾ ಮೇಲೆ ಬಿದ್ದಿದೆ. ಘಟನೆಯ ಪರಿಣಾಮ ಶಶಿಕಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಶಶಿಕಲಾ ಅವರಿಗೆ ಇಬ್ಬರು ಸಣ್ಣ ಮಕ್ಕಳಿದ್ದಾರೆ. ಶಶಿಕಲಾ ಗಂಡ ಕೂಡ ಕೂಲಿ ಕೆಲಸ ಮಾಡುತ್ತಿದ್ದಾರೆ. ಇವರು ಶಹಾಪುರ ಮೂಲದವರಾಗಿದ್ದಾರೆ. ಸದ್ಯ ವೈಟ್‌ಫೀಲ್ಡ್ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು, ಡಿಸಿಪಿ ಶಶಿಕುಮಾರ್ ಗುಣಾರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಳೆಯ ಆರ್ಭಟಕ್ಕೆ ಗೋಡೆ ಕುಸಿದು ಓರ್ವ ಮಹಿಳೆ ಬಲಿ
2025-05-19 13:24:03- 64